ಮಿತ್ರರೆ,
ಕರ್ತೃಪದವೆಂದರೆ, ಒಂದು ವಾಕ್ಯದಲ್ಲಿ ಪ್ರಾಮುಖ್ಯತೆ ಹೊಂದಿರುವ, ಮತ್ತು ಕ್ರಿಯೆಯನ್ನು ನಡೆಸುವ ವ್ಯಕ್ತಿ/ವಸ್ತು ಅಥವಾ ಅದರ ಸರ್ವನಾಮ. ಕೆಳಗಿನ ಉದಾಹರಣೆಗಳನ್ನು ಗಮನಿಸಿ.
1. ರಾಜು ಒಬ್ಬ ಬುದ್ದಿವಂತ ಹುಡುಗ.
2. ನಾನು ನಾಳೆ ಬರುತ್ತೇನೆ.
ಈ ವಾಕ್ಯಗಳಲ್ಲಿ ರಾಜು, ನಾನು – ಕರ್ತೃಪದಗಳು.
1. ಕನ್ನಡವಾಕ್ಯಗಳಲ್ಲಿ ಕರ್ತೃಪದವು ವಾಕ್ಯದ ಆರಂಭದಲ್ಲೇ ಇರಬೇಕೆಂದಿಲ್ಲ, ಮಧ್ಯೆ ಅಥವಾ ಕೊನೆಯಲ್ಲೂ ಇರಬಹುದು.
ಉದಾ: 1. ನಾಳೆಯಿಂದ ನಾನು ಓದಲು ಆರಂಭಿಸುತ್ತೇನೆ.
2. ನಾಳೆ ರಾತ್ರಿ 9 ಘಂಟೆಯ ಬಸ್ಸಿನಲ್ಲಿ ನಾವು ಮುಂಬಯಿಗೆ ಹೋಗುತ್ತೇವೆ.
3. ನಮ್ಮ ಮನೆಯಲ್ಲಿ ಒಂದು ಗಿಳಿ ಇದೆ.
2. ಕೆಲವು ಆದೇಶ ವಾಕ್ಯಗಳಲ್ಲಿ ಕರ್ತೃಪದ ‘ನೀನು/ನೀವು’ ಮರೆಯಾಗಿರುತ್ತದೆ.
ಉದಾ:
1. ನಾಳೆ ಬಾ.
2. ನನಗೆ ನೂರು ರೂಪಾಯಿ ಕೊಡಿ.
ಈ ಎರಡೂ ವಾಕ್ಯಗಳೂ ಒಬ್ಬ ಇನ್ನೊಬ್ಬನಿಗೆ ಹೇಳಿದ್ದು. ಸರಿಯೆ? ಆದ್ದರಿಂದ ನಾಳೆ ಬಾ = “ನೀನು ನಾಳೆ ಬಾ”, ನನಗೆ ನೂರು ರೂಪಾಯಿ ಕೊಡಿ = “ನೀವು ನನಗೆ ನೂರು ರೂಪಾಯಿ ಕೊಡಿ” ಎಂದೂ ಅರ್ಥ ಮಾಡಿಕೊಳ್ಳಬೇಕು. ಹೀಗೆ ಈ ವಾಕ್ಯಗಳಲ್ಲಿ ಕರ್ತೃಪದ -ನೀನು, ನೀವು- ಮರೆಯಾಗಿವೆ.
3. ಕನ್ನಡ ವಾಕ್ಯಗಳಲ್ಲಿ ಕರ್ತೃಪದವು ಕೊನೆಯ ಶಬ್ದದೊಂದಿಗೆ ಸಂಬಂಧ ಹೊಂದಿರುತ್ತದೆ.
ಗಮನಿಸಿ ನೋಡಿ, ಮೇಲಿನ ವಾಕ್ಯಗಳಲ್ಲಿ ಕರ್ತೃಪದ ಮಾತ್ರ ಕೊನೆಯಪದದೊಂದಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ
ಹಾಗೂ ಇವೆರಡರಿಂದಲೇ ಮೂಲವಾಕ್ಯ ರಚನೆಯಾಗಿದೆ. ಉಳಿದ ಶಬ್ದಗಳು ಕರ್ತೃಪದದೊಂದಿಗೆ ಬೇರೆ ವಿಷಯಗಳೊಡನೆ ಇರುವ ಸಂಬಂಧವನ್ನು ತಿಳಿಸುತ್ತವೆಯೇ ಹೊರತು ಅವುಗಳಿಲ್ಲದಿದ್ದರೂ ವಾಕ್ಯ ತಪ್ಪಾಗುವುದಿಲ್ಲ. ಆದುದರಿಂದ ಒಂದು ಕನ್ನಡ ವಾಕ್ಯದಲ್ಲಿನ ಕರ್ತೃಪದ ಯಾವುದೆಂದು ತಿಳಿಯಲು ಪ್ರತಿಯೊಂದು ಶಬ್ದವನ್ನು ಕೊನೆಯಪದದೊಂದಿಗೆ ಹೋಲಿಸಿ. ಯಾವ ಶಬ್ದ ಕೊನೆಯಪದದೊಂದಿಗೆ ಹೊಂದಿಕೊಳ್ಳುತ್ತದೋ ಅದೇ ಕರ್ತೃಪದವಾಗಿರುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ/ವ್ಯಕ್ತಿಗಳು/ವಸ್ತು/ವಸ್ತುಗಳು ಅಥವಾ ಅವುಗಳ ಸರ್ವನಾಮ ಮಾತ್ರ ಕರ್ತೃಪದವಾಗಿರುತ್ತವೆ.
ಉದಾ: ನಾಳೆ ರಾತ್ರಿ 9 ಘಂಟೆಯ ಬಸ್ಸಿನಲ್ಲಿ ನಾವು ಮುಂಬಯಿಗೆ ಹೋಗುತ್ತೇವೆ.
ಈ ವಾಕ್ಯದಲ್ಲಿನ ಪ್ರತಿಯೊಂದು ಶಬ್ದವನ್ನು ಕೊನೆಯ ಪದದೊಂದಿಗೆ ಹೋಲಿಸಿ ನೋಡಿ.
ನಾಳೆ ರಾತ್ರಿ …. ಹೋಗುತ್ತೇವೆ. (ಯಾರೆಂದಿಲ್ಲ, ಅಪೂರ್ಣ ವಾಕ್ಯ)
9 ಘಂಟೆಯ…. ಹೋಗುತ್ತೇವೆ. (ಅಪೂರ್ಣ ವಾಕ್ಯ)
ಬಸ್ಸಿನಲ್ಲಿ ….. ಹೋಗುತ್ತೇವೆ. (ಯಾರು? ಅಪೂರ್ಣ ವಾಕ್ಯ)
ನಾವು …. ಹೋಗುತ್ತೇವೆ.- ಇದು ಮಾತ್ರ ಸರಿಯಾದ ಜೋಡಣೆ. ಅಂದರೆ ಈ ವಾಕ್ಯದ ಕರ್ತೃಪದ = ನಾವು.
ಈ ಕೆಳಗಿನ ವಾಕ್ಯಗಳಲ್ಲಿರುವ ಕರ್ತೃಪದವನ್ನು ಕಂಡುಹಿಡಿಯಿರಿ.
1. ಇಷ್ಟು ಹೊತ್ತಿಗೆ ನಮ್ಮ ತಾಯಿ ಅಡುಗೆ ಮಾಡುತ್ತ ಇರುತ್ತಾರೆ.
2. ನಾಳೆ ರಾತ್ರಿ 8 ಘಂಟೆಗೆ ನಾಟಕ ಆರಂಭವಾಗುತ್ತದೆ.
3. ನೀನು ಕರೆದರೂ ಕೂಡಾ ನಾನು ಬರುವುದಿಲ್ಲ.
4. ಈ ಕಾರು ಯಾರದ್ದು?
5. ಈ ಪುಸ್ತಕವನ್ನು ನಾನು ನಿನ್ನೆ ಖರೀದಿಸಿದೆ.
6. ನಾಳೆ ಬೆಳಿಗ್ಗೆ ನೀನು ಇಲ್ಲಿಗೆ ಬರುತ್ತೀಯಾ?
7. ಅವರು ಮನೆಯಲ್ಲಿರದಿದ್ದರೆ ನೀನು ಏನು ಮಾಡುತ್ತೀ?
8. ನಾನು ಹೊರಟಾಗ ಮಳೆ ಬರುತ್ತಿತ್ತು.
9. ಅವನಿಗೆ ನಾಳೆ ಬರಲು ಹೇಳು.
10.ನಾನು ಹೇಳಿದ ವಿಷಯ ನಿನಗೆ ಅರ್ಥವಾಯಿತೆ?
(ಉತ್ತರ:1. ನಮ್ಮ ತಾಯಿ 2. ನಾಟಕ 3. ನಾನು 4. ಕಾರು 5. ನಾನು 6. ನೀನು 7. ನೀನು 8. ಮಳೆ 9. ನೀನು 10.ನಿನಗೆ)